
ಉಬುಂಟು ಆವೃತ್ತಿಗಳು
ಉಬುಂಟು ಆಭಿವರ್ಧಕರಾದ ಕೆನೋನಿಕಲ್ ಲಿಮಿಟೆಡ್ ನಿರ್ವಹಣಾ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ಪ್ರತೀ ಆರು ತಿಂಗಳುಗಳಿಗೊಮ್ಮೆ ಬಿಡುಗಡೆಮಾಡುತ್ತಾರೆ. ಅಂತಹ ಆವೃತ್ತಿಗಳ ಆವೃತ್ತಿ ಸಂಖ್ಯೆಯು ಬಿಡುಗಡೆಗೊಳ್ಳುವ ವರ್ಷ ಮತ್ತು ತಿಂಗಳಿನಿಂದ ಕೂಡಿರುತ್ತದೆ. ಉದಾಹರಣೆಗೆ, ಮೊದಲ ಉಬುಂಟು ಆವೃತ್ತಿ "ಉಬುಂಟು ೪.೧೦" ಬಿಡುಗಡೆಗೊಂಡಿದ್ದು ೨೦೦೪ರ ಅಕ್ಟೋಬರ್ ೨೦. ಇದರ ಪರಿಣಾಮವಾಗಿ, ಭವಿಷ್ಯದ ಆವೃತ್ತಿ ಸಂಖ್ಯೆಗಳು ಬಿಡುಗಡೆ ಸಂದರ್ಭದ ತಿಂಗಳು ಮತ್ತು ವರ್ಷವನ್ನು ಹೊಂದಿರುತ್ತವೆ. ಪ್ರತಿ ಉಬುಂಟು ಆವೃತ್ತಿಯು ಗ್ನೋಮ್‍ನ ಹೊಸ ಆವೃತ್ತಿಯು ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಬಿಡುಗಡೆಗೊಳ್ಳುತ್ತದೆ. ಗ್ನೋಮ್ ಪ್ರತಿಯಾಗಿ X.Orgನ ಹೊಸ ಆವೃತ್ತಿಯು ಬಿಡುಗಡೆಗೊಂಡ ಸುಮಾರು ಒಂದು ತಿಂಗಳ ನಂತರ ಬಿಡುಗಡೆಗೊಳ್ಳುತ್ತದೆ. ಪರಿಣಾಮವಾಗಿ, ಪ್ರತಿ ಉಬುಂಟು ಬಿಡುಗಡೆಯು ಗ್ನೋಮ್ ಮತ್ತು X.Orgನ ಹೊಸ ಆವೃತ್ತಿಗಳನ್ನು ಹೊಂದಿರುತ್ತದೆ. ಸಮಸಂಖ್ಯೆಯ ವರ್ಷಗಳ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆಗೊಳ್ಳುವ ಆವೃತ್ತಿಯು ಕೆನೋನಿಕಲ್ ಮೂಲಕ ದೀರ್ಘಕಾಲದ ಬೆಂಬಲ ಪಡೆಯಲಿದ್ದು, ಐದು ವರ್ಷಗಳ ಕಾಲ ಸಾಫ್ಟ್‍ವೇರ್ ಅಪ್‍ಡೇಟ್‍ಗಳು ಮತ್ತು ತಾಂತ್ರಿಕ ಬೆಂಬಲ ಸಹ ಲಭ್ಯವಿದೆ. ಆದಾಗ್ಯೂ, ೧೨.೦೪ಕ್ಕಿಂತ ಹಿಂದಿನ ಡೆಸ್ಕ್ಟಾಪ್ ಆವೃತ್ತಿಯ LTS ಬಿಡುಗಡೆಗಳಿಗೆ ಕೇವಲ ಮೂರು ವರ್ಷಗಳ ಬೆಂಬಲ ಲಭ್ಯವಿತ್ತು. ೧೪.೦೪ ಮತ್ತು ೧೬.೦೪ ಪ್ರಸ್ತುತ LTS ಆವೃತ್ತಿಗಳಾಗಿವೆ. ೧೩.೦೪ಕ್ಕಿಂತ ಹಿಂದಿನ, LTS ಅಲ್ಲದ ಇತರೆ ಆವೃತ್ತಿಗಳಿಗೆ ಸಾಮಾನ್ಯವಾಗಿ ೧೮ ತಿಂಗಳುಗಳು ಅಥವಾ ಕನಿಷ್ಟ ಮುಂದಿನ LTS ಆವೃತ್ತಿಯ ಬಿಡುಗಡೆವರೆಗು ಬೆಂಬಲ ಲಭ್ಯವಿತ್ತು.